ಟ್ಯೂಟಾನಿಕ್ ಛಂದಸ್ಸು -
ಡೆನ್ಮಾರ್ಕ್ ನಾರ್ವೆ ಸ್ವೀಡನ್ ಹಾಗೂ ಐಸ್ಲೆಂಡ್‍ಗಳ ಪೂರ್ವ ಮಧ್ಯಯುಗದ ಜನಾಂಗಗಳಾದ ಟ್ಯೂಟನರಿಗೆ ಕಾವ್ಯ ರಚನೆಯ ವಿಧಾನ ಹೆಚ್ಚುಕಡಿಮೆ ಒಂದೇ ತೆರನಾಗಿತ್ತು. ಕಾರಣ, ಅವರ ಪದ್ಯಾವಳಿ ಲಿಖಿತವಾಗಿರದೆ ಬಾಯಿಂದ ಬಾಯಿಗೆ ವಾಚಿಕವಾಗಿ ನಡೆದು ಬಂದದ್ದು. ಮೊದಲು ಅವರೆಲ್ಲ ಪೇಗನರಾಗಿದ್ದು ಆಮೇಲೆ ಕ್ರಿಶ್ಚನ್ ಮತಕ್ಕೆ ಸೇರಿಕೊಂಡರು. ಕ್ರಿಶ್ಚನ್ ಪಾದ್ರಿಗಳು ಹಳೆಯ ಟ್ಯೂಟಾನಿಕ್ ಬರವಣಿಗೆಯ ಅನೇಕ ಪ್ರಕಾರಗಳಿಗೆ ಮುಟ್ಟುಗೋಲು ಹಾಕಿ ಅವು ಕಣ್ಮರೆಯಾಗುವಂತೆ ಮಾಡಿದರು. ಆದರೂ ಹಲ ಕೆಲವು ರೂನ್ ಶಾಸನಗಳು ಹಳೆಯ ಇಂಗ್ಲಿಷ್ ಹಳೆಯ ನಾರ್ಸ್ ಭಾಷೆಗಳಲ್ಲಿ ಉಳಿದುಬಂದಿವೆ. ಅಲ್ಲದೆ ಹಳೆಯ ಸ್ಯಾಕ್ಸನ್ ಹಳೆಯ ಹೈ ಜರ್ಮನ್ ಭಾಷೆಗಳಲ್ಲಿ ಸಾಕಷ್ಟು ಸಾಹಿತ್ಯ ಲಭ್ಯವಾಗಿದೆ. ಅವುಗಳ ಆಧಾರದಿಂದ ಟ್ಯೂಟಾನಿಕ್ ಕವಿತೆಯ ಸ್ವರೂಪ ಲಕ್ಷಣವನ್ನು ಕಲ್ಪಿಸಿಕೊಳ್ಳುವುದು ಸಾಧ್ಯ.

	ವಿಳಂಬ ನಡಿಗೆ, ಬಳಸು ಮಾತು, ಪುನರುಕ್ತಿ, ವಾಚಾಳತ್ವದಂತೆ ತೋರುವ ವಾಗ್ವಿಸ್ತಾರ, ಕಾವ್ಯಕ್ಕೇ ಮೀಸಲಿಟ್ಟ ಶಬ್ದಾವಳಿ, ಪದಜೋಡಣೆಯಲ್ಲಿ ಅಧಿಕ ಸ್ವಾತಂತ್ರ್ಯ, ರೂಪಕಾಲಂಕಾರದ ಬಾಹುಳ್ಯ-ಈ ಗುಣಗಳಿಂದ ಟ್ಯೂಟಾನಿಕ್ ಕವಿತ್ವ ವಿಶಿಷ್ಟತೆಯನ್ನು ಗಳಿಸಿಕೊಂಡಿದೆ. ಅದು ಹೆಚ್ಚಾಗಿಯೂ ಕಲಾಪೂರ್ಣವಾಗಿಯೂ ಬಳಸಿಕೊಂಡ ಕೆನ್ನಿಂಗ್ಸ್ ಎಂಬ ಸಂಕೀರ್ಣ ವಿಶೇಷಣ ಅಥವಾ ವರ್ಣನಾತ್ಮಕ ವಿಶೇಷಣ ಬಹಳ ಸ್ವಾರಸ್ಯವಾಗಿದೆ. ಕವಿಯ ಭಾವನೆಗೆ ಸೂರ್ಯ ದೇವರ ದೀಪ; ಸಮುದ್ರ ಜನಸಂದೋಹದ ಬೂದು ಹೆದ್ದಾರಿ ಅಥವಾ ತಿಮಿಂಗಿಲದ ಸವಾರಿ ಜಾಗ; ಗ್ರೆಂಡಲ್ ಅಂಕಿತದ ಭೂತ ಮೃತ್ಯುವಿನ ನೆರಳು ಅಥವಾ ಗುರಿ ಬೇಟೆಗಾರ ಅಥವಾ ಸಂಕಟ ತರುವವ; ನರಕವೆಂಬುದು ಹಾವಿನ ಹಜಾರ; ಮಿಂಚು ಕ್ಷಿಪ್ರ ಕಣ್ಮಿಟುಕು; ಮಳೆ ಅಗಸದ ಕಂಬನಿ; ಸಾಯುವುದು ಹರ್ಷದ ಬೀಸಾಡಿಕೆ. ಇಂಥವುಗಳಲ್ಲಿ ಕವಿಯ ಸ್ವಂತಾನುಭವ ಎಷ್ಟೋ ಕಡೆ ಸ್ವಷ್ಟವಾಗಿ ಪ್ರಕಟವಾಗಿದೆ; ಹಲವು ಕಡೆ ಏನೋ ಔಪಚಾರಿಕವಾದ ಶುಷ್ಕನುಡಿಗಟ್ಟೂ ಗೋಚರಿಸುತ್ತದೆ.

ಪಂಕ್ತಿಯೇ ಮೂಲಾಂಶ; ಒಂದು ಪಂಕ್ತಿಗೆ ಕಡ್ಡಾಯವಾಗಿ ಎರಡರ್ಧ. ಪ್ರತಿ ಅರ್ಧಕ್ಕೂ ಬೇರೆ ಅಸ್ತಿತ್ವವುಂಟು. ವಾಕ್ಯ ಪಂಕ್ತಿಯ ಆದಿಯಲ್ಲೊ ಮಧ್ಯದಲ್ಲೊ ಪ್ರಾರಂಭವಾಗಬಹುದು. ಪಂಕ್ತಿಯ ಎರಡೂ ಭಾಗಗಳೂ ಒಂದು ವಿರಾಮದಿಂದ ಪ್ರತ್ಯೇಕಿಸಲ್ಪಡುತ್ತವೆ. ಉಚ್ಚಾರಾಂಶ ಎರಡು ವಿಧ: ಸ್ವರಭಾರ ಉಳ್ಳದ್ದು, ಇಲ್ಲದ್ದು ಒಂದು ಪಂಕ್ತಿಯಲ್ಲಿ ಮೂರೊ ನಾಲ್ಕೊ ಸ್ವರಭಾರದ ಉಚ್ಚಾರಾಂಶ ಇದ್ದೇ ಇರಬೇಕು; ಅವು ಎರಡು ಅರ್ಧಗಳಿಗೂ ಹಂಚಿರಬೇಕು, 2+2 ಅಥವಾ 2+1 ರೀತಿಯಲ್ಲಿ. ಅದೂ ಅಲ್ಲದೆ ಅವು ಆದ್ಯಕ್ಷರ ಪ್ರಾಸದಿಂದ ಬಂಧಿತವಾಗಿರಬೇಕು. ವ್ಯಂಜನಕ್ಕೆ ಅದೇ ವ್ಯಂಜನ ಪ್ರಾಸ; ಸ್ವರಗಳಾದರೂ ಒಂದಕ್ಕೊಂದು ಪ್ರಾಸವಾಗಬಹುದು, ಅಥವಾ ಅದೇ ಸ್ವರದ ಪುನರುಕ್ತಿಗೊಂಡರೆ ಆಗಬಹುದು. ಸ್ವರಭಾರರಹಿತ ಉಚ್ಚಾರಾಂಶಗಳ ಸಂಖ್ಯೆ ಎಷ್ಟಾದರೂ ಇರಬಹುದು. ಪಂಕ್ತಿ ಕಿರಿದಾಗಲಿ ಲಂಬವಾದದ್ದಾಗಲಿ ಎಲ್ಲ ಪಂಕ್ತಿಗಳಿಗೂ ಸಮಾನ ತೂಕ, ಸಮಾನ ಬೆಲೆ.

	ವನ್ ವಿಂಡ್ ಎಂಡಿ ವಾಟರ್| ವರೋಸ್ ಸೋರೊಗೋಡನ್
	(ವಾಯು ಮತ್ತು ವಾರಿ ಸೆಣಸಿದವು | ವಾರಿಧಿ ಸಿಟ್ಟೆದ್ದಿತು)
	ಎಂಗ್ಲ ಅಂಡ್ ಸೆಆಕ್ಸ | ಉಪ್ಟ್ ಬಿಕೋಮನ್
	ಒಫರ್ ಬ್ರಾಡ ಬ್ರಿಮೂ | ಬ್ರಿಟೆನ್ ಸೋಟನ್
	(ಎಂಗ್ಲರೂ ಸೆಆಕ್ಸಸರೂ | ಇಲ್ಲಿಗೆ ಬಂದರು,
	ಭಾರಿ ಬುಲುಜಲವ ಹಾದು | ಬ್ರಿಟನ್ ಹುಡುಕಿಕೊಂಡು)
	ಮೋಡ್ ಶಿಯಾಲ್ ದಿ ಮಾರಿ | ದಿ ಯೂರಿ ಮೀಗನ್ ಲಿಟ್ಲಾದ್
	(ಕೆಚ್ಚು ಹೆಚ್ಚು ಕುದುರಬೇಕು | ನಮ್ಮ ಕಡುಪು ಕಡಿಮೆಯಾದಷ್ಟು)
ಪದ್ಯ ಪಂಕ್ತಿ ಎಷ್ಟು ಉದ್ದವಾಗಬಹುದು ಎಂಬುದಕ್ಕೆ ಇದೊಂದು ಉದಾಹರಣೆ :
	ದಿಯು ಮೆರಿ ವಾರ್ಡ್ ಸೊ ಮುಓದಾಗ್ | ವಾನ್ದಾ ದೆರೊ 
	ಮಾನ್ನೊ ನಿಗನ್ ಲೆಂಗ್ರನ್ ಲಿಬೀಸ್
(ಅದರಿಂದ ನರರೆಲ್ಲ ನಿರಾಶರಾದರು | ಅವರಲ್ಲಿ ಒಬ್ಬ ಕೂಡ ನಿರೀಕ್ಷಿಸಲಿಲ್ಲ. ಹೆಚ್ಚು ಬದುಕುವೆನೆಂದು)

	ಪೂರ್ಣ ಪಂಕ್ತಿ ಕೂಡ ಆಧಾರಮೌಲ್ಯವಾಗದೆ ಅರ್ಧಪಂಕ್ತಿಗೇ ಆ ಗೌರವವನ್ನು ಕೊಟ್ಟಿದ್ದಿತಾಗಿ, ಹಲವು ಪಂಕ್ತಿಗಳ ಕೂಟದ ತ್ರಿಪದಿ ಚತುಷ್ಟದಿ ಷಟ್ಪದಿ ಮುಂತಾದ ಯಾವ ರಚನೆಗೂ ಆಸ್ಪದವಿರಲಿಲ್ಲ. ಅದೇ ಎಲ್ಲ ಸ್ಯ್ಕಾಂಡಿನೇವಿಯನ್ ಭಾಷೆಗಳಿಗೂ ಅನ್ವಯಿಸುತ್ತಿತ್ತು. ಆದರೆ ಹಳೆಯ ನಾರ್ಸ್ ನುಡಿಯು ಕೆಲವು ಕವನಗಳಲ್ಲಿ ಮಾತ್ರ ಫಾರ್ನಿರ್‍ದಿ ಸ್ಲಾಕ್ ಮತ್ತು ಮಾಲಹತ್ೃ ಎಂಬ ಕೊಂಚ ಭಿನ್ನರಚನೆಯ ಎರಡು ಚತುಷ್ಪದಿ ವೃತ್ತ ತಲೆಯೆತ್ತಿದುವು. ಬಹುಶಃ ಅವು ಟ್ಯೂಟಾನಿಕ್ ಅವಧಿಯ ಕೊನೆಯಲ್ಲಿ ಬಂದವು.												(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ